
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯ ಬಿಜೆಪಿ- ಜೆಡಿಎಸ್ ಮೈತ್ರಿ ಪಾಳಯದ ಅಭ್ಯರ್ಥಿ ಹೆಸರು ಇಂದು ಘೋಷಣೆಯಾಗಿದ್ದು. ಪ್ರತಿಷ್ಠಿತ ಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಈ ಕುರಿತು ಜೆಡಿಎಸ್ ನ ಪರಮೋಚ್ಚ ನಾಯಕ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಬಿಜೆಪಿ-ಜೆಡಿಎಸ್ ನಾಯಕರ ಸಮ್ಮುಖದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ.

ಉಭಯ ಪಕ್ಷಗಳ ನಾಯಕರು ಸುದೀರ್ಘ ಚರ್ಚೆ ನಡೆಸಿದ ಬಳಿಕ ಅಂತಿಮವಾಗಿ ನಿಖಿಲ್ ಕುಮಾರ್ ಸ್ವಾಮಿ ಹೆಸರು ಪ್ರಕಟ ಮಾಡಿದ್ದಾರೆ. ಈ ಮೂಲಕ ಮೈತ್ರಿ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಬಿಎಸ್ ಯಡಿಯೂರಪ್ಪ ನಿವಾಸದಲ್ಲಿಂದು ನಡೆದ ಜೆಡಿಎಸ್-ಬಿಜೆಪಿ ನಾಯಕರ ಸಮನ್ವಯ ಸಭೆ ಬಳಿಕ ನಿಖಿಲ್ ಹೆಸರು ಘೋಷಣೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ-ಜೆಡಿಎಸ್ ನ ಹಿರಿಯ ನಾಯಕರು ಉಪಸ್ಥಿತರಿದ್ದರು. ಇನ್ನು ಇದೀಗ ನಿಖಿಲ್ ಕುಮಾರಸ್ವಾಮಿಯ ಹೆಸರು ಘೋಷಣೆ ಮಾಡಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಈಗಾಗಲೇ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಉಪಚುನಾವಣೆ ಕಣಕ್ಕಿಳಿಸಲಾಗಿದೆ. ಈ ಚುನಾವಣೆಯಲ್ಲಿ ನಿಖಿಲ್ ಭವಿಷ್ಯ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.


