
ಚನ್ನಪಟ್ಟಣ: ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಅಭ್ಯರ್ಥಿಯ ಆಯ್ಕೆ ‘ದೋಸ್ತಿ’ ನಾಯಕರಿಗೆ ದೊಡ್ಡ ಟೆನ್ಷನ್ ಹುಟ್ಟಿಸಿದೆ. ಮರಳಿ ಮಾತೃ ಪಕ್ಷಕ್ಕೆ ಸಿಪಿ ಯೋಗೇಶ್ವರ್ ಜಂಪ್ ಆಗಿದ್ದೇ ತಡ ‘ಮೈತ್ರಿ’ ಪಡೆ ಪ್ಲಾನ್ ಬುಡಮೇಲಾಗಿದೆ. ಇದೀಗ ಮೈತ್ರಿ ನಾಯಕರಿಗೆ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿದೆ.
ಇಂದು ಬೆಂಗಳೂರಿನಲ್ಲಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬೊಂಬೆನಾಡಿಗೆ ಮೈತ್ರಿ ಅಭ್ಯರ್ಥಿ ಬಹುತೇಕ ಫಿಕ್ಸ್ ಆಗುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನದ ವೇಳೆಗೆ ಎಲ್ಲವೂ ಫೈನಲ್ ಆಗಲಿದ್ದು, ಕಾಂಗ್ರೆಸ್ ಪಾಳಯದ ಇಂದಿನ ಎಲ್ಲಾ ಬೆಳವಣಿಗೆಯನ್ನ ಸೂಕ್ಷ್ಮವಾಗಿ ಗಮನಿಸಿ, ನಂತರ ಸಿಪಿ ಯೋಗೇಶ್ವರ್ ವಿರುದ್ಧ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ.
ನಿಖಿಲ್/ಅನಸೂಯಗೆ ಟಿಕೆಟ್..?
ಸಿಪಿವೈ ಮಾತೃಪಕ್ಷಕ್ಕೆ ಕೈ ಜೋಡಿಸಿದ ನಂತರ ದೋಸ್ತಿ ನಾಯಕರ ಪ್ಲ್ಯಾನ್ ಉಲ್ಟಾ ಹೊಡೆದಿದ್ದು, ಇದೀಗ ಕುಮಾರಸ್ವಾಮಿ ಯಾರಿಗೆ ಟಿಕೆಟ್ ಕೊಡ್ತಾರೆ? ಮುಂದಿನ ರಣತಂತ್ರ ಏನು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಪುತ್ರ ನಿಖಿಲ್ ಅಥವಾ ಸಹೋದರಿ ಅನಸೂಯ ಮಂಜುನಾಥ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಈಗಾಗಲೇ ಕಾರ್ಯಕರ್ತರ ಜತೆ ಒಂದು ಸುತ್ತಿನ ಮಾತುಕತೆ ಕೂಡ ಮುಗಿದಿದ್ದು, ಸಾಕಷ್ಟು ಅಳೆದು ತೂಗಿ ಕುಮಾರಸ್ವಾಮಿ ನಿರ್ಧಾರ ಕೈಗೊಳ್ಳಲಿದ್ದಾರೆ. ಎರಡು ಬಾರಿ ನಿಖಿಲ್ ಸೋತಿದ್ದು, ಪುತ್ರನ ಭವಿಷ್ಯದ ಬಗ್ಗೆ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಎಂದು ಜೆಡಿಎಸ್ ವಲಯದಲ್ಲಿ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಹೀಗಾಗಿಯೇ ಅನಸೂಯಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರುವ ಪ್ಲಾನ್ ಕುಮಾರಸ್ವಾಮಿ ಮಾಡಿದ್ದಾರೆ ಎನ್ನಲಾಗುತ್ತಿದೆ.


