ನ್ಯೂಯಾರ್ಕ್: ಟಿ20 ವಿಶ್ವಕಪ್ ನ 8ನೇ ಪಂದ್ಯದಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನ ಶುರು ಮಾಡಲಿದೆ. ಟಿ20 ಕ್ರಿಕೆಟ್ನಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧ ಈವರೆಗೆ 7 ಪಂದ್ಯಗಳನ್ನಾಡಿದೆ. ಈ ಏಳೂ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತ ತಂಡವೇ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ.
ಇದಾಗ್ಯೂ ನಸ್ಸೌ ಮೈದಾನದ ಪಿಚ್ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಹೀಗಾಗಿ ಐರ್ಲೆಂಡ್ ಕಡೆಯಿಂದಲೂ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಬಹುದು.
ಟೀಮ್ ಇಂಡಿಯಾ ಪಾಲಿಗೆ ಮಹತ್ವದ ಪಂದ್ಯ:
ಈ ಪಂದ್ಯವು ಭಾರತದ ಪಾಲಿಗೆ ತುಂಬಾ ಮಹತ್ವದ ಪಂದ್ಯ. ಏಕೆಂದರೆ ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ. ಅಂದರೆ ಜೂನ್ 9 ರಂದು ಇದೇ ಮೈದಾನದಲ್ಲಿ ಪಾಕ್ ವಿರುದ್ಧ ಕಣಕ್ಕಿಳಿಯಬೇಕಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ.
ಅದರಲ್ಲೂ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನು ರೂಪಿಸಿಕೊಳ್ಳಬೇಕಿದೆ. ಹೀಗಾಗಿ ಐರ್ಲೆಂಡ್ ವಿರುದ್ದದ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಸಿಕ್ಕಿರುವ ಸಮರಭ್ಯಾಸ ಎನ್ನಬಹುದು. ಅದರಂತೆ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ದದ ಪಂದ್ಯಕ್ಕಾಗಿ ಎಲ್ಲಾ ರೀತಿಯಲ್ಲೂ ಸಜ್ಜಾಗಬೇಕಿದೆ.
ಪಂದ್ಯ ಎಷ್ಟು ಗಂಟೆಗೆ ಶುರು?
ನ್ಯೂಯಾರ್ಕ್ನ ನಸ್ಸೌ ಕೌಂಟೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಇನ್ನು ಟಾಸ್ ಪ್ರಕ್ರಿಯೆ 7.30 ಕ್ಕೆ ನಡೆಯಲಿದೆ. ಹಾಗೆಯೇ ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಸ್ ಮತ್ತು ಡಿಸ್ನಿ ಹಾಟ್ ಸ್ಟಾರ್ ಆ್ಯಪ್ನಲ್ಲಿ ವೀಕ್ಷಿಸಬಹುದು.
.


