
ಮೈಸೂರು, ನವೆಂಬರ್ 16, 2024: ಆರ್ ಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮತ್ತೊಂದು ದೂರು ನೀಡಿದ್ದಾರೆ. ಸಾರ್ವಜನಿಕೆ ವಲಯದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಸುಳ್ಳು ಸುದ್ದಿ ಹರಡುತ್ತಿರುವ ಸ್ನೇಹಮಯಿ ಕೃಷ್ಣ ಅವರನ್ನು ಈ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿದ, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಸ್ನೇಹಮಹಿ ಕೃಷ್ಣ ವಿರುದ್ಧ ಇಂದು ಮತ್ತೊಂದು ದೂರು ಸಲ್ಲಿಸಿದ್ದಾರೆ. ಆತ ಒಬ್ಬ ರೌಡಿ ಶೀಟರ್ ಆಗಿದ್ದು ಆತನನ್ನು ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಸ್ನೇಹಮಯಿ ಕೃಷ್ಣ ವಿರುದ್ಧದ 22 FIR ಕಾಪಿಗಳನ್ನು ಬಿಡುಗಡೆ ಮಾಡುವ ಮೂಲಕ ಸ್ನೇಹಮಯಿ ಕೃಷ್ಣ ನೀಡಿದ್ದ “ತಾಕತ್ ಇದ್ರೆ ನನ್ನ ವಿರುದ್ಧ ಎಫ್ಐಆರ್ ಬಿಡುಗಡೆ ಮಾಡಲಿ” ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಸ್ನೇಹಮಯಿ ಕೃಷ್ಣ ಒಬ್ಬ ರೌಡಿಶೀಟರ್. ಆತನ ಮೇಲೆ 44 ಕೇಸ್ ಗಳಿವೆ, ಆತನ ಮೇಲೆ ಮೂರುವರೆ ವರ್ಷಗಳಿಂದ ಯಾವುದೇ ಸೆಕ್ಯೂರಿಟಿ ಕೇಸ್ ಹಾಕಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ದಾಖಲೆ ಬಿಡುಗಡೆ ಮಾಡುತ್ತಿರುವ ಈತ ಸಾರ್ವಜನಿಕ ವಲಯದಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾನೆ. ರೌಡಿಶೀಟರ್ ಆಗಿರುವ ಈತ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿ ಸುಳ್ಳು ದಾಖಲೆ ನೀಡಿದ್ದಾನೆ. ಆತ ಬಿಡುಗಡೆ ಮಾಡಿರುವ ಹಣ ಕಟ್ಟಿರುವ ಚಲನ್ ದಾಖಲೆ ಸುಳ್ಳು, ಆತ ಬಿಡುಗಡೆ ಮಾಡಿರುವ ದಾಖಲೆಗಳು ಸುಳ್ಳು ಎಂದು ಮುಡಾ ಅಧಿಕಾರಿಗಳೇ ಹೇಳುತ್ತಾರೆ ಹೀಗಾಗಿ ಈತನನ್ನು ಕೂಡಲೇ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಹಾಗೂ ಅರೆಸ್ಟ್ ಮಾಡದಿದ್ದರೆ ನಾಳೆಯಿಂದ ಧರಣಿ ಸತ್ಯಾಗ್ರಹ ಮಾಡುವುದಾಗಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.







