
ಮೈಸೂರು, ನವೆಂಬರ್ 16, 2024: ಮುಡಾ ಹಗರಣ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತಷ್ಟು ಮಾಹಿತಿ ಮತ್ತು ದಾಖಲೆಗಳನ್ನು ಇಂದು ಸ್ನೇಹಮಯಿಕೃಷ್ಣ ಮೈಸೂರು ಲೋಕಾಯುಕ್ತಾ ಅಧಿಕಾರಿಗಳಿಗೆ ನೀಡಿದ್ದಾರೆ.
ಮುಡಾ ಹಗರಣ ಬಹಿರಂಗಗೊಂಡ ಮೊದಲ ದಿನದಿಂದಲೂ ನನಗೂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಪಡೆದಿದ್ದ 14 ಸೈಟುಗಳ ಹಂಚಿಕೆಯಲ್ಲಿಯೂ ನನ್ನ ಕೈವಾಡವಿಲ್ಲ ಎಂದಿದ್ದಾರೆ. ಹಗರಣ ಸಂಬಂದ ಮೈಸೂರು ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಯುತ್ತಿದ್ದು, ತನಿಖೆಗೆ ಸಹಾಯವಾಗುವಂತೆ ದೂರುದಾರ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿಕೃಷ್ಣ ಮೈಸೂರು ಲೋಕಾಯುಕ್ತ ಕಚೇರಿಗೆ ಮತ್ತೊಮ್ಮೆ ಭೇಟಿ ನೀಡಿ, ಕೆಲವು ದಾಖಲಾತಿಗಳೊಂದಿಗೆ ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ನಾನು ನೀಡಿರುವ ದೂರು ಅರ್ಜಿಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಈ ದಿನ ನನಗೆ ಸಿಕ್ಕ ಮತ್ತಷ್ಟು ಮಾಹಿತಿ ಮತ್ತು ದಾಖಲಾತಿಗಳನ್ನು ನೀಡಿರುತ್ತೇನೆ. ಸಿದ್ದರಾಮಯ್ಯ ವಿರುದ್ಧ ಯಾವುದೇ ಸಾಕ್ಷಿ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಪ್ರಭಾವವನ್ನು ಬೀರಿದ್ದಾರೆ ಎನ್ನುವ ವಿಷಯದಲ್ಲಿ ದಾಖಲೆಗಳನ್ನು ನೀಡಿದ್ದೇನೆ. ಸಿದ್ದರಾಮಯ್ಯನವರ ಅಧಿಕಾರ ಅವಧಿಯಲ್ಲಿ ಎಲ್ಲಾ ಕೃತ್ಯಗಳು ನಡೆದಿವೆ. ಸಿದ್ದರಾಮಯ್ಯ ಅಧಿಕಾರದ ಅವದಿಯಲ್ಲಿ ಭೂ ಸ್ವಾಧೀನ ನಡೆಯುತ್ತದೆ, ಆಗ ಸಿ ಬಸವೇಗೌಡ ಎಂಬುವವರು ಮುಡಾದ ಅಧ್ಯಕ್ಷರಾಗಿದ್ದರು. ಅನ್ಯಕ್ರಾಂತ ಆದೇಶ ಮಾಡಿದ ಅಂದಿನ ಜಿಲ್ಲಾಧಿಕಾರಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಸಂಸದರಾಗಿದ್ದಾರೆ. 2014ರಲ್ಲಿ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಬದಲಿ ನಿವೇಶನ ಕೊಡಬೇಕು ಎಂದು ಅರ್ಜಿ ಸಲ್ಲಿಸುತ್ತಾರೆ. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು ಎಂಬ ಕಾರಣಕ್ಕೆ ಅಂದು ಆ ವಿಚಾರ ಕೈ ಬಿಟ್ಟು 2021ರಲ್ಲಿ ನಿವೇಶನ ಪಡೆದಿದ್ದಾರೆ ಎಂದು ಸ್ನೇಹಮಯಿಕೃಷ್ಣ ಆರೋಪಿಸಿದ್ದಾರೆ.




